ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎತ್ತಿನಹೊಳೆಯೋ?, ಪರಮಶಿವಯ್ಯ ವರದಿಯೋ? ಸರ್ಕಾರದಲ್ಲೇ ಅಸ್ಪಷ್ಟ, ಯಾವುದಕ್ಕೂ ಇಲ್ಲ ಖಚಿತ ಮಾಹಿತಿ, ಹೀಗಾಗಿ ಇದು ಗೊಂದಲದ ಹೊಳೆಎತ್ತಿನಹೊಳೆ ಯಾವ ಯೋಜನೆಯಿಂದ ಅನುಷ್ಠಾನ ಎಂಬುದು ತಿಳಿದಿಲ್ಲ | ನೀರು, ಭೂಮಿ, ಅರಣ್ಯ ಭೂಮ

Mainashree
Updated On : 2 Mar 2014, 10:16 am

ಬೆಂಗಳೂರು: ದಶಕಗಳಿಂದ ದಣಿದಿರುವ ಜೀವಗಳಿಗೆ ಯಾವ ಯೋಜನೆ ನೀರು ಕೊಡುತ್ತದೆ? ಎತ್ತಿನಹೊಳೆಯೋ ಅಥವಾ ಜಿ.ಎಸ್. ಪರಮಶಿವಯ್ಯ ಅವರ ವರದಿಯೋ?
ಈ ಬಗ್ಗೆ ಖಡಕ್ ಉತ್ತರ ನೀಡಲು ಸರ್ಕಾರವೇ ಇನ್ನೂ ಸಿದ್ಧವಿಲ್ಲ. ಯಾವ ಯೋಜನೆ ಮೂಲಕ ಈಗ ಶಂಕುಸ್ಥಾಪನೆಯಾಗುತ್ತಿರುವ ನೀರಾವರಿ ಯೋಜನೆ ಅನುಷ್ಠಾನವಾಗುತ್ತದೆ ಎಂಬ ಸ್ಪಷ್ಟ ಮಾಹಿತಿ ಯಾರಲ್ಲೂ ಇಲ್ಲ.  ಎತ್ತಿನಹೊಳೆ ಯೋಜನೆ ಜತೆಗೆ ಜಿ.ಎಸ್. ಪರಮಶಿವಯ್ಯ ವರದಿಯನ್ನೂ ಅನುಷ್ಠಾನ ಮಾಡುತ್ತೇವೆ ಎನ್ನುತ್ತಾರೆ ರಾಜಕಾರಣಿಗಳು. ಆದರೆ, ಸರ್ಕಾರದ ಮುಖ್ಯ ಎಂಜಿನಿಯರ್‌ಗಳು ಹೇಳುವುದೇ ಬೇರೆ.
ಎತ್ತಿನಹೊಳೆ ಮತ್ತು ಜಿ.ಎಸ್. ಪರಮಶಿವಯ್ಯ ಯೋಜನೆಗಳಲ್ಲಿ ಸುಮಾರು 10ರಿಂದ 14 ಟಿಎಂಸಿ ನೀರು ಓವರ್‌ಲ್ಯಾಪ್ ಆಗುವುದರಿಂದ, ಯಾವ ಪ್ರದೇಶದ ನೀರನ್ನು ಯಾವ ಯೋಜನೆಯಲ್ಲಿ ಪಡೆಯಬಹುದಾಗಿದೆ ಎಂಬುದನ್ನು ಆದೇಶಿಸಬೇಕು. ಎತ್ತಿನಹೊಳೆ ಯೋಜನೆ ಮತ್ತು ಜಿ.ಎಸ್. ಪರಮಶಿವಯ್ಯನವರ ಯೋಜನೆಗಳ ಎರಡರಲ್ಲೂ ಸರ್ವಿಸ್ ಕಾಲುವೆಗೆ ಟೆಂಡರ್ ಕರೆದಿರುವುದರಿಂದ ಒಂದನ್ನು ರದ್ದುಪಡಿಸಿ ಒಂದೇ ಯೋಜನೆಯಡಿ ಸರ್ವಿಸ್ ಕಾಲುವೆಯ ವಿಸ್ತೃತ ಯೋಜನೆ ವರದಿ (ಡಿಪಿಆರ್) ತಯಾರಿಸುವ ಬಗ್ಗೆ ಸರ್ಕಾರ ಆದೇಶಿಸಬೇಕು.
ಎತ್ತಿನಹೊಳೆ ಯೋಜನೆ, ಹೇಮಾವತಿ ಫ್ಲಡ್ ಫ್ಲೋ ಕೆನಾಲ್ ಮತ್ತು ಜಿ.ಎಸ್. ಪರಮಶಿವಯ್ಯನವರ ಯೋಜನೆಗಳ ಮೂಲಕ ನೀರನ್ನು ಪಡೆಯುವ ಬಗ್ಗೆ ಡಿಪಿಆರ್ ಪಡೆದ ನಂತರವಷ್ಟೇ ನಿರ್ಣಯ ಕೈಗೊಳ್ಳಬಹುದು. ಹೀಗೆಂದು, ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ ನಾಲಾ ವಲಯ, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಮುಖ್ಯ ಎಂಜಿನಿಯರ್‌ಗಳ ಸಲಹಾ ಸಮಿತಿ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ. ಅಂದರೆ ಸರ್ಕಾರದ ಯಾವ ಇಲಾಖೆಯಲ್ಲೂ ಯಾವ ಯೋಜನೆ ಅನುಷ್ಠಾನವಾಗುತ್ತಿದೆ? ಯಾವುದರಿಂದ ಎಷ್ಟು ನೀರು ಬರುತ್ತದೆ? ಇದಕ್ಕೆ ಎಷ್ಟು ಭೂಮಿ ಅಗತ್ಯ? ಎಷ್ಟು ಅರಣ್ಯ ಭೂಮಿ ಬಳಕೆಯಾಗುತ್ತದೆ ಎಂಬ ಯಾವುದೇ ಮಾಹಿತಿ ಇಲ್ಲ.
ಸರ್ಕಾರದ ಒಟ್ಟಾರೆ 'ಸರ್ಕಸ್‌' ಪ್ರಕಾರ, ಮೂರು ಯೋಜನೆಗಳಿಂದ ಮಧ್ಯ ಕರ್ನಾಟಕ 9 ಜಿಲ್ಲೆಗಳ 43 ತಾಲೂಕುಗಳ ಕೆರೆಗಳು ಹಾಗೂ ಕೆರೆಗಳಿಲ್ಲದ ಗ್ರಾಮಗಳಲ್ಲಿ ಹೊಸ ಕೆರೆಕಟ್ಟೆ ನಿರ್ಮಿಸಿ ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಪ್ರಾರಂಭಿಸಬೇಕು. ಮೂರು ಯೋಜನೆಗಳೆಂದರೆ, ಜಿ.ಎಸ್. ಪರಮಶಿವಯ್ಯ ಪ್ರಸ್ತಾಪಿಸಿರುವ ಪಶ್ಚಿಮಾಭಿಮುಖವಾಗಿ ಹರಿಯುವ ಯೋಜನೆ, ಎತ್ತಿನಹೊಳೆ ಯೋಜನೆ ಮತ್ತು ಹೇಮಾವತಿ ಫ್ಲಡ್ ಫ್ಲೋ ಕೆನಾಲ್ ಯೋಜನೆ. ಜಿಎಸ್‌ಪಿ ವರದಿಯ ಯೋಜನೆ ಎಂದು ಹೇಳಲು ಸಾಧ್ಯವಿಲ್ಲ.
ಏಕೆಂದರೆ ಅದು ಪ್ರಸ್ತಾವಿತ ಅಂಕಿ- ಅಂಶಗಳ ಮಾಹಿತಿ. ಅದನ್ನು ಯೋಜನೆ ಸ್ವರೂಪಕ್ಕೆ ತರಬೇಕಾಗಿದೆ. ಇನ್ನು ಎತ್ತಿನಹೊಳೆ ಹಾಗೂ ಕೆನಾಲ್‌ಗಳ ಯೋಜನೆಯನ್ನು ಯೋಜನೆ ಎನ್ನುವುದಕ್ಕೆ ಯಾವ ಅಧ್ಯಯನವೂ ಇಲ್ಲ. ವರದಿಯೂ ಇಲ್ಲ.
ಜಿಎಸ್‌ಪಿ ವರದಿಯ ಯೋಜನಾ ಸಂಖ್ಯೆ-1 ಹಾಗೂ 3ರಿಂದ ಪ್ರಯೋಜನ ಪಡೆಯುವ ಪ್ರದೇಶಗಳಲ್ಲಿ  ಕುಡಿಯುವ ನೀರು, ಅಂತರ್ಜಲ ಮರುಪೂರಣಕ್ಕೆ ಅಗತ್ಯವಾಗಿರುವ ನೀರು ತಾಳೆಯಾಗುತ್ತಿಲ್ಲ. ಮಳೆಗಾಲದ ಕೆಲವೇ ದಿನಗಳಲ್ಲಿ ಲಭ್ಯವಾಗುವ ಈ ನೀರಿನ ಪ್ರಮಾಣವನ್ನು ಮಧ್ಯಂತರ ಸಂಗ್ರಹಣಾ ಜಲಾಶಯಗಳನ್ನು ನಿರ್ಮಿಸಿ, ಆ ನೀರನ್ನು ವರ್ಷವಿಡೀ ಬಳಸಿಕೊಳ್ಳಬೇಕು. ಸಂಯುಕ್ತ ಸೇವಾ ಕಾಲುವೆ ಪಂಕ್ತೀಕರಣ ಅಗತ್ಯ ಎಂದು ಮುಖ್ಯ ಎಂಜಿನಿಯರ್‌ಗಳು ಹೇಳಿದ್ದಾರೆ.
ಜಿಎಸ್‌ಪಿ ರೂಪಿಸಿರುವ ಪ್ರಸ್ತಾವನೆಗಳ ಆಧಾರದ ಮೇಲೆ ತನಿಖಾನ್ವೇಷಣೆಯ ಡಿಪಿಆರ್ ತಯಾರಿಕೆ ಹಂತದಲ್ಲಿದೆ. ಕರ್ನಾಟಕ ವಾಟರ್ ಗ್ರಿಡ್ ಕೆನಾಲ್ ಪ್ರಸ್ತಾವನೆ ನಂತರ ಯೋಜನೆ-1 ಮತ್ತು 3ರಲ್ಲಿ ಮಾರ್ಪಾಟು ಮಾಡಬೇಕಾಗಿರುತ್ತದೆ. ಎತ್ತಿನಹೊಳೆ ಯೋಜನೆ ಈಗಾಗಲೇ ಅನುಷ್ಠಾನ ಹಂತದಲ್ಲಿದ್ದು, ಸೇವಾ ಕಾಲುವೆಗಳ ವಿವರವಾದ ಯೋಜನೆ ವರದಿ ತಯಾರಾಗುತ್ತಿದ್ದು, ಜಿಎಸ್‌ಪಿ ಪ್ರಸ್ತಾವಿತ ಯೋಜನೆಗಳಿಂದ ಲಭ್ಯವಾಗುವ ನೀರಿನ ಪ್ರಮಾಣ 83.07 ಟಿಎಂಸಿ ಹಾಗೂ ಕಾವೇರಿ ನೀರಾವರಿ ನಿಗಮದಿಂದ ಪರಿಶೀಲನಾ ಹಂತದಲ್ಲಿ ಇತರೆ ಮೂಲಗಳಿಂದ ಲಭ್ಯವಾಗುವ ನೀರಿನ ಪ್ರಮಾಣವನ್ನು ಸಂಯುಕ್ತ ಕಾಲುವೆ ವಿತರಣಾ ವ್ಯವಸ್ಥೆಯನ್ನು ಹಂತ ಹಂತವಾಗಿ ನಿರ್ಮಾಣಕ್ಕೆ ಒತ್ತು ಕೊಟ್ಟು ರೂಪಿಸುವುದು ಸೂಕ್ತ. ಅಂದರೆ ಎಲ್ಲವೂ ಇನ್ನೂ ಸಲಹೆ ರೂಪದಲ್ಲೇ ಇವೆ. ಆದರೆ ಶಂಕುಸ್ಥಾಪನೆಗೆ ಹೊರಟಿರುವುದು ಮಾತ್ರ ವಿಪರ್ಯಾಸ.

ನಿಗಮದ ಪ್ರಕಾರ ಎತ್ತಿನಹೊಳೆ ಹೇಗೆ?
ಕರ್ನಾಟಕ ನೀರಾವರಿ ನಿಗಮ ಎತ್ತಿನಹೊಳೆ ಯೋಜನೆಯ ಸಂಕ್ಷಿಪ್ತ ವರದಿಯನ್ನು ಮಂಡಿಸಿರುವುದು ಹೀಗೆ... ರಾಜ್ಯದ ಪೂರ್ವ ಮತ್ತು ಮಧ್ಯಭಾಗದಲ್ಲಿ ಮಳೆಯ ಪ್ರಮಾಣ ವಾರ್ಷಿಕ 400 ಮಿಮೀ. ಪಶ್ಚಿಮಘಟ್ಟ ಪ್ರದೇಶದಲ್ಲಿ ವಾರ್ಷಿಕ 6000 ಮಿಮೀಗಿಂತ ಹೆಚ್ಚು. ಮಳೆ ಅನಿಶ್ಚಿತತೆಯಿಂದ ಮಧ್ಯಭಾಗದ ಪ್ರದೇಶಗಳು ಮರುಭೂಮಿಯಾಗುವ ಸಂಭವವಿದೆ. ಆದ್ದರಿಂದ ಎತ್ತಿನಹೊಳೆ ಹಾಗೂ ಇತರೆ ಹೊಳೆಗಳಿಂದ ನೀರನ್ನು ಎತ್ತಿ ಕೊಳವೆಗಳ ಮೂಲಕ ಪಶ್ಚಿಮಘಟ್ಟ ದಾಟಿಸುವುದು. ನಂತರ ಕಾಲುವೆ ಮೂಲಕ ತುಮಕೂರಿನ ದೇವರಾಯದುರ್ಗದ ಹತ್ತಿರ ನಿರ್ಮಿಸುವ ಜಲಾಶಯಕ್ಕೆ ನೀರು ಹರಿಸುವುದು. ಈ ಜಲಾಶಯದಿಂದ ನೀರು ಎತ್ತಿ ಕೊಳವೆ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಒದಗಿಸುವುದು. ಸಕಲೇಶಪುರದ ಸಮೀಪ ಇರುವ ಎತ್ತಿನಹೊಳೆ, ಎತ್ತಿನಹೊಳೆಗೆ ಉಪಹೊಳೆ-1, 2, ಕಾಡುಮನೆಹೊಳೆ-2, 3, ಎತ್ತಿನಹೊಳೆ ಕೆಳಭಾಗ, ಕೇರಿಹೊಳೆ, ಹೊಂಗದಳ್ಳಗಳನ್ನು ನೀರಿನ ಮೂಲ ಎಂದು ಎತ್ತಿನಹೊಳೆ ಯೋಜನೆಯಲ್ಲಿ ಗುರುತಿಸಲಾಗಿದೆ. ಮುಂಗಾರು ಮಳೆಗಾಲದಲ್ಲಿ ಈ ಹಳ್ಳಗಳ ಅಡ್ಡಲಾಗಿ ನಿರ್ಮಿಸುವ ಬ್ಯಾರೇಜುಗಳಿಂದ ನೀರು ಪಂಪ್ ಮಾಡಿ ಸಂಪರ್ಕ ಮಾರ್ಗದ ಪಕ್ಕದಲ್ಲಿ ಸಮಾನಾಂತರವಾಗಿ ಭೂಮಿಯೊಳಗೆ ಹೂತು ಹಾಕುವ ಪೈಪುಗಳ ಮೂಲಕ ದೇವರಾಯದುರ್ಗದ ಹತ್ತಿರದ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿಗೆ ನೀರು ಪೂರೈಸಲಾಗುತ್ತದೆ. ಈ ಪ್ರದೇಶ ಕಾವೇರಿ ಮತ್ತು ಕೃಷ್ಣಾ ಕಣಿವೆಯನ್ನು ಬೇರ್ಪಡಿಸುವ ಎತ್ತರದ ಪ್ರದೇಶವಾಗಿದ್ದು, ಇಲ್ಲಿಂದ 233 ಕಿಮೀ ಗುರುತ್ವ ಕಾಲುವೆ ನಿರ್ಮಿಸಿ, 10 ಟಿಎಂಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯ ನಿರ್ಮಿಸಿ ಅಲ್ಲಿ ಸಂಗ್ರಹಿಸಲಾಗುತ್ತದೆ. ಈ ಸಂಗ್ರಹಣಾ ಜಲಾಶಯದಿಂದ ನೀರನ್ನು ಎತ್ತಿ 88.2 ಕಿಮೀ ರೈಸಿಂಗ್‌ಮೇನ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ 198 ಸಣ್ಣ ಕೆರೆ ಹಾಗೂ 55 ಕಿಮೀ ರೈಸಿಂಗ್‌ಮೇನ್ ಮೂಲಕ ಕೋಲಾರದ 139 ಸಣ್ಣ ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ.

ಜಿ.ಎಸ್.ಪಿ. ಪರಿಕಲ್ಪನೆ
ಮಧ್ಯ ಕರ್ನಾಟಕ ಜಿಲ್ಲೆಗಳು ಮುಂದಿನ ದಿನಗಳಲ್ಲಿ ಭೀಕರ ನೀರಿನ ಅಭಾವ ಎದುರಿಸಬೇಕಾಗುತ್ತದೆ ಎಂದು ಮನಗಂಡಿದ್ದ ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಅವರು 30 ವರ್ಷಗಳ ಹಿಂದೆಯೇ ಒಂದು ವರದಿ ತಯಾರಿಸಿದ್ದರು. ಪಶ್ಚಿಮಾಭಿಮುಖವಾಗಿ ಹರಿದು, ಬಳಸಿಕೊಳ್ಳಲು ಸಾಧ್ಯವಾಗದೆ ವ್ಯರ್ಥವಾಗಿ ಸಮುದ್ರಕ್ಕೆ ಸೇರುವ ನೀರನ್ನು ಮಧ್ಯಭಾಗದ ಬಯಲುಸೀಮೆಯ 9 ಜಿಲ್ಲೆಗಳ 43 ತಾಲೂಕುಗಳ 10,509 ಗ್ರಾಮಗಳ 9025 ಕೆರೆಗಳಿಗೆ ಉಪಯೋಗಿಸಿಕೊಳ್ಳುವ ವರದಿ ಇದು. ಪಶ್ಚಿಮಘಟ್ಟದ ಹಳ್ಳಗಳಲ್ಲಿರುವ ಸುಮಾರು 2500 ಟಿಎಂಸಿ ನೀರಿನಲ್ಲಿ ಕೇವಲ 120 ಟಿಎಂಸಿ ನೀರನ್ನು ವರ್ಷದಲ್ಲಿ ಎರಡು ಬಾರಿ ಈ ಭಾಗಕ್ಕೆ ತರುವ ಪರಿಕಲ್ಪನೆ. 2 ಕೋಟಿ ಜನ, 1 ಕೋಟಿ ಜಾನುವಾರುಗಳಿಗೆ ನೀರಾಗುತ್ತದೆ.

337 ಕೆರೆಗೆ ಮಾತ್ರ ನೀರು!
ರಾಜ್ಯ ಮಧ್ಯಭಾಗದ ಬಯಲುಸೀಮೆ ಪ್ರದೇಶಗಳ 9 ಜಿಲ್ಲೆಗೆ ನೀರು. ಅದಿಲ್ಲದಿದ್ದರೂ ಐದು ಜಿಲ್ಲೆಗಳಿಗೆ ನೀರು ಬಂದೇ ಬರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಎತ್ತಿನಹೊಳೆ ಯೋಜನೆಯಿಂದ 12 ಸಾವಿರ ಕೋಟಿ ವೆಚ್ಚದಿಂದ ಕೋಲಾರ ಹಾಗೂ ಚಿಕ್ಕಬಳ್ಳಾಪುರದ 337 ಸಣ್ಣ ಕೆರೆಗಳು ಮಾತ್ರ ತುಂಬುತ್ತವೆ. ನೀರಾವರಿ ನಿಗಮ ನೀಡುವ ವರದಿಯ ಪ್ರಕಾರ ಕೋಲಾರ- ಚಿಕ್ಕಬಳ್ಳಾಪುರದಲ್ಲಿರುವ 337 ಕೆರೆಗಳ ಸಾಮರ್ಥ್ಯದ ಅರ್ಧದಷ್ಟು ನೀರು ತುಂಬಿಸಲಾಗುತ್ತದೆ. ಎತ್ತಿನಹೊಳೆ ಯೋಜನೆಯ ಒಂದು ಭಾಗವಾಗಿರುವ ಏತ ಕಾಮಗಾರಿಗೆ 239 ಹೆಕ್ಟೇರ್ ಭೂಮಿ ಅಗತ್ಯವಿದೆ. ಇದರಲ್ಲಿ ಅರಣ್ಯ ಭೂಮಿ 19.02 ಹೆಕ್ಟೇರ್. ಈ ಯೋಜನೆಗೆ ಅಗತ್ಯವಿರುವ ವಿದ್ಯುತ್ ಪ್ರಮಾಣ 370 ಮೆಗಾವ್ಯಾಟ್. ಇದನ್ನು ಕೆಪಿಟಿಸಿಎಲ್ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಪಡೆಯಲು ನೋಂದಣಿ ಅರ್ಜಿ ಸಲ್ಲಿಸಲು ಯೋಜಿಸಲಾಗಿದೆ. ಹರವನಹಳ್ಳಿ ವಿತರಣಾ ತೊಟ್ಟಿಯ ನಂತರ 233 ಕಿ.ಮೀ. ಗುರುತ್ವ ಸರ್ವೆಕಾರ್ಯ ಮುಗಿದಿದ್ದು, ಪಂಕ್ತೀಕರಣ ಪ್ರಸ್ತಾವನೆ ತಯಾರಿಕೆ ಹಂತದಲ್ಲಿದೆ. ದೇವರಾಯನದುರ್ಗದ ಬಳಿಯ ಸಂಗ್ರಹಣಾ ಜಲಾಶಯದ ಸರ್ವೆ ಮುಗಿದಿದೆ. ಕುಡಿಯುವ ನೀರು ಪೂರೈಸಲು ಬೇಕಾಗುವ ಸಂಗ್ರಹಣಾ ಜಲಾಶಯಗಳ ಸ್ಥಳದ ತನಿಖಾನ್ವೇಷಣೆ ಕಾರ್ಯ ಮುಗಿದಿದೆ.

-ಕೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement